ಯಾದಗಿರಿ ಹಾಸ್ಟೆಲ್‌ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಹೈಸ್ಕೂಲ್ ವಿದ್ಯಾರ್ಥಿನಿ : ಗರ್ಭಿಣಿಯಾಗಿದ್ದೇ ಗೊತ್ತಿಲ್ಲ ಎಂದ ವಾರ್ಡನ್

Spread the love

ಯಾದಗಿರಿ: ಜಿಲ್ಲೆಯ ಶಹಪುರ ಪಟ್ಟಣದ ವಸತಿ ನಿಲಯವೊಂದರ ವಿದ್ಯಾರ್ಥಿನಿಗೆ ಶೌಚಾಲಯದಲ್ಲಿಯೇ ಹೆರಿಗೆಯಾದ ಘಟನೆ ನಡೆದಿದೆ.ಶಹಪುರದಲ್ಲಿರುವ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಬುಧವಾರ ಶೌಚಕ್ಕೆ ಹೋದಾಗ 2:30ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಲ್ಲದೆ, ಇದು ಶಿಕ್ಷಣ ಇಲಾಖೆ ಸೇರಿದಂತೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಜೊತಗೆ ವಸತಿ ನಿಲಯದಲ್ಲಿರುವ ಇನ್ನಷ್ಟು ವಿದ್ಯಾರ್ಥಿನಿಯರ ಪಾಲಕರಲ್ಲಿ ಆತಂಕ ಹೆಚ್ಚಿಸಿದೆ.

ತಾಯಿ-ಮಗು ಆರೋಗ್ಯವಾಗಿದೆ

ವಿದ್ಯಾರ್ಥಿನಿಗೆ ಹೆರಿಗೆಯಾದ ಸುದ್ದಿ ತಿಳಿದು ತಕ್ಷಣವೇ ನಗರದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಸದ್ಯ ತಾಯಿ ಮಗು ಅರಾಮಗಿ, ಆರೋಗ್ಯವಾಗಿದ್ದಾರೆ ಎಂದು ಸರಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಘಟನೆ ಕುರಿತು ವಸತಿ ನಿಲಯದ ಮೇಲ್ವಿಚಾರಕಿ ಗೀತಾ ತನಗೆ ಯಾವುದು ಮಾಹಿತಿ ಇಲ್ಲವೆಂದು ಉತ್ತರ ನೀಡುತ್ತಿದ್ದಾರೆ

ಶಾಲೆಯ ಪ್ರಾಂಶುಪಾಲರಾದ ಬಸ್ಸಮ್ಮ ಪಾಟೀಲ್ ಮಾತನಾಡಿ, ʻನಮಗೆ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಬಗ್ಗೆ ಮಾಹಿತಿ ಇಲ್ಲ. ಗರ್ಭಿಣಿಯಾಗಿದ್ದ ಲಕ್ಷಣವೂ ಕಂಡಿರಲಿಲ್ಲ. ಈ ಘಟನೆಯೂ ನಮಗೆ ಅಚ್ಚರಿಯನ್ನುಂಟು ಮಾಡಿದೆ. ಬಾಲಕಿಗೆ ಮದುವೆ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಪೋಷಕರು ನಮಗೆ ತಿಳಿಸಿಲ್ಲ ಎಂದು ಮಾತನಾಡಿದ್ದಾರೆ.

ʻಮಕ್ಕಳ ಹಕ್ಕುಗಳ ಆಯೋಗದ ವತಿಯಿಂದ ಅಧಿಕಾರಿಗಳನ್ನು ಆಸ್ಪತ್ರೆಗೆ ಕಳುಹಿಸಿ ಸಮಗ್ರ ಮಾಹಿತಿಯನ್ನು ಕಲೆಹಾಕಿ ವರದಿ ನೀಡುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸುಂಬೆ ತಿಳಿಸಿದ್ದಾರೆ.

ಗರ್ಭಿಣಿಯಾಗಲು ಕಾರಣ ಯಾರು?

ವಸತಿ ನಿಲಯದ ವಿದ್ಯಾರ್ಥಿನಿ ಗರ್ಭ ಧರಿಸಲು ಕಾರಣ ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವಿದ್ಯಾರ್ಥಿನಿ ಈ ಕುರಿತು ಬಾಯಿ ಬಿಡುತ್ತಿಲ್ಲ ಎಂದು ವಸತಿ ನಿಲಯದ ಮೇಲ್ವಿಚಾರಕಿ ಮತ್ತು ಪ್ರಾಚಾರ್ಯ ಹೇಳುತ್ತಿದ್ದಾರೆ. ಸಂಬಂಧಿಕರು ಅಥವಾ ವಸತಿ ನಿಲಯದ ಶಿಕ್ಷಕರು ಅಥವಾ ನಿಲಯದ ಹೊರಗಡೆಯ ಯುವಕರು ಎಂಬುದು ಬಯಲಾಗಬೇಕಾಗಿದೆ. ಪೊಲೀಸರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಒಟ್ಟಾರೆಯಾಗಿ ಈ ಘಟನೆ ಶಿಕ್ಷಣ ಇಲಾಖೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಏನೊಂದು ಅರಿಯದ ಪಾಲಕರು ಮೌನಕ್ಕೆ ಶರಣಾಗಿದ್ದಾರೆ.

WhatsApp Group Join Now

Spread the love

Leave a Reply