ಮಂಗಳೂರು : ಅನನ್ಯಾ ಭಟ್ ನಾಪತ್ತೆ ಪ್ರಕರಣದ (Ananya Bhat Missing Case) ಸೃಷ್ಟಿಕರ್ತೆ ಸುಜಾತ ಭಟ್ (Sujatha Bhat) ಬೆಳ್ಳಂಬೆಳಗ್ಗೆ ವಿಶೇಷ ತನಿಖಾ ತಂಡದ (SIT) ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪೊಲೀಸರು ಆ.29 ರಂದು ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್ಗೆ ನೋಟಿಸ್ ನೀಡಿದ್ದರು.
ಶುಕ್ರವಾರ ವಿಚಾರಣೆ ನಿಗದಿಯಾಗಿದ್ದರೂ ಇಂದು ಬೆಳಗ್ಗೆ 5 ಗಂಟೆಗೆ ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ಇಬ್ಬರು ವಕೀಲರ ಜೊತೆ ಆಗಮಿಸಿದ್ದಾರೆ. ಸುಜಾತ ಭಟ್ ಬರುವಾಗ ಅಧಿಕಾರಿಗಳು ನಿದ್ದೆಯಲ್ಲಿದ್ದರು. ಕಚೇರಿಗೆ ಬಂದ ನಂತರ ಪೊಲೀಸರು ಸುಜಾತ ಭಟ್ ಅವರನ್ನು ಒಳಗಡೆ ಬರುವಂತೆ ಹೇಳಿದ್ದಾರೆ. ಸದ್ಯ ಈಗ ಸುಜಾತ ಭಟ್ ಎಸ್ಐಟಿ ಕಚೇರಿಯ ಒಳಗಡೆಯೇ ಇದ್ದಾರೆ.
ಮಣಿಪಾಲದಲ್ಲಿ ಎಂಬಿಬಿಎಸ್ ಓದುತ್ತಿದ್ದ ಪುತ್ರಿ ಅನನ್ಯಾ ಭಟ್ ಧರ್ಮಸ್ಥಳಕ್ಕೆ ಬಂದಾಗ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಠಾಣೆಗೆ ಹೋದಾಗ ಯಾರೂ ನನ್ನ ದೂರನ್ನು ತೆಗೆದುಕೊಂಡಿಲ್ಲ. ಪ್ರಶ್ನೆ ಮಾಡಿದರೆ ನನಗೆ ಧರ್ಮಸ್ಥಳದಲ್ಲಿ ಹೊಡೆಯಲಾಗಿತ್ತು. ಉತ್ಕನನದ ವೇಳೆ ನನ್ನ ಮಗಳ ಮೂಳೆ ಸಿಕ್ಕಿದರೆ ನಾನು ಸನಾತನ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡುತ್ತೇನೆ ಎಂದು ಸುಜಾತ ಭಟ್ ಕಲರ್ ಕಲರ್ ಕಥೆ ಕಟ್ಟಿದ್ದರು.
ನಂತರದ ದಿನಗಳಲ್ಲಿ ಒಂದೊಂದು ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿಯ ಹೇಳಿಕೆ ನೀಡುತ್ತಿದ್ದ ಕಾರಣ ಅನನ್ಯಾ ಭಟ್ ಪ್ರಕರಣ ನಕಲಿ ಎನ್ನುವುದು ಸಾಬೀತಾಗಿತ್ತು. ಕೊನೆಗೆ ಸುಜಾತ ಭಟ್ ನಾನು ಹೇಳುತ್ತಿರುವುದು ಸುಳ್ಳು ಎಂದು ಅಧಿಕೃತವಾಗಿ ತಿಳಿಸಿ ಈ ನಾಪತ್ತೆ ಪ್ರಕರಣಕ್ಕೆ ಅಂತ್ಯ ಹಾಡಿದ್ದರು.
ಸುಜಾತ ಭಟ್ ಅಂತ್ಯ ಹಾಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಮೀರ್ ಅನನ್ಯಾ ಭಟ್ಗೆ ಸಂಬಂಧಿಸಿದಂತೆ ಎಐ ವಿಡಿಯೋ ರಚಿಸಿ ಬುರುಡೆ ಬಿಟ್ಟಿದ್ದ. ಈ ವಿಡಿಯೋ ಲಕ್ಷಗಟ್ಟಲ್ಲೇ ವ್ಯೂ ಪಡೆದುಕೊಂಡಿತ್ತು ಮತ್ತು ಪ್ರಕರಣಕ್ಕೆ ದೊಡ್ಡ ತಿರುವು ನೀಡಿತ್ತು. ಆದರೆ ಸುಳ್ಳು ಕಥೆ ಕಟ್ಟಿ ದೇವಸ್ಥಾನದ ವಿರುದ್ಧ ಷಡ್ಯಂತ್ರ ನಡೆಸಿದ್ದಕ್ಕೆ ಸುಜಾತ ಭಟ್ ವಿರುದ್ಧ ಕೇಸ್ ದಾಖಲಿಸುವಂತೆ ಭಾರೀ ಒತ್ತಡ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸುಜಾತ ಭಟ್ ಅವರನ್ನು ವಿಚಾರಣೆಗೆ ಬರುವಂತೆ ಸೂಚಿಸಿದ್ದರು.