ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಿಗದಿಯಾಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಟಿಕೆಟ್ ರೀಫಂಡ್ ಮಾಡುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಘೋಷಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಒಂದು ವಾರ ಸ್ಥಗಿತಗೊಂಡಿದ್ದ ಐಪಿಎಲ್ ಮೇ 17ರಂದು ಪುನರಾರಂಭವಾಗಿತ್ತು. ಆದರೆ, ಶನಿವಾರ ನಡೆಯಬೇಕಿದ್ದ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.
‘ಮೇ 17 ರಂದು ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯವು ಪ್ರತಿಕೂಲ ಹವಾಮಾನದಿಂದಾಗಿ ರದ್ದಾಗಿದ್ದರಿಂದ, ಎಲ್ಲ ಮಾನ್ಯ ಟಿಕೆಟ್ ಹೊಂದಿರುವವರು ಪೂರ್ಣ ರೀಫಂಡ್ ಪಡೆಯಲು ಅರ್ಹರಾಗಿದ್ದಾರೆ’ ಎಂದು ಫ್ರಾಂಚೈಸಿ ಹೇಳಿಕೆಯಲ್ಲಿ ತಿಳಿಸಿದೆ.
‘ಡಿಜಿಟಲ್ ಟಿಕೆಟ್ ಹೊಂದಿರುವವರಿಗೆ ಟಿಕೆಟ್‌ಗಳನ್ನು ಬುಕ್ ಮಾಡಲು ಬಳಸಿದ ಅವರ ಮೂಲ ಖಾತೆಗೆ 10 ವರ್ಕಿಂಗ್ ದಿನಗಳಲ್ಲಿ ಮರುಪಾವತಿ ಮಾಡಲಾಗುತ್ತದೆ. ಮೇ 31ರೊಳಗೆ ನಿಮಗೆ ಮರುಪಾವತಿ ಸಿಗದಿದ್ದರೆ, ದಯವಿಟ್ಟು ಬುಕಿಂಗ್ ವಿವರಗಳೊಂದಿಗೆ refund@ticketgenie.in ಗೆ ಇಮೇಲ್ ಕಳುಹಿಸಿ. ಭೌತಿಕ ಟಿಕೆಟ್ ಹೊಂದಿರುವವರು ಮರುಪಾವತಿ ಪಡೆಯಲು ತಮ್ಮ ಮೂಲ ಟಿಕೆಟ್ ಅನ್ನು ಅವರು ಟಿಕೆಟ್ ಖರೀದಿಸಿದ ಅಧಿಕೃತ ಮೂಲಕ್ಕೆ ಒಪ್ಪಿಸಬೇಕಾಗುತ್ತದೆ. ಉಚಿತ ಟಿಕೆಟ್‌ಗಳಿಗೆ ಮರುಪಾವತಿ ಅನ್ವಯಿಸುವುದಿಲ್ಲ’ ಎಂದು ಅದು ಹೇಳಿದೆ.
ಇದಕ್ಕೂ ಮೊದಲು, ಮೇ 13 ಮತ್ತು ಮೇ 17 ರಂದು ನಿಗದಿಯಾಗಿದ್ದ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಂದ್ಯಗಳ ಟಿಕೆಟ್‌ಗಳನ್ನು ಮರುಪಾವತಿಸುವುದಾಗಿ ಆರ್‌ಸಿಬಿ ಘೋಷಿಸಿತ್ತು. ಆದರೆ, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಮೇ 17ರಂದು ಅದೇ ತಂಡ, ಅದೇ ಸ್ಥಳ ಮತ್ತು ಅದೇ ಸಮಯದಲ್ಲಿ ಪಂದ್ಯ ನಡೆಯುವುದರಿಂದ ಅವೇ ಟಿಕೆಟ್‌ಗಳನ್ನು ಬಳಸಿ ಪಂದ್ಯ ವೀಕ್ಷಿಸಬಹುದು ಎಂದಿತ್ತು. ಆದರೆ, ಶನಿವಾರ ಮಳೆಯಿಂದಾಗಿ ಮತ್ತೊಮ್ಮೆ ಪಂದ್ಯ ರದ್ದಾದ ನಂತರ ರೀಫಂಡ್ ಮಾಡುವುದಾಗಿ ತಿಳಿಸಿದೆ.
ಇದೀಗ ಆರ್‌ಸಿಬಿ ಮತ್ತು ಕೆಕೆಆರ್ ಎರಡಕ್ಕೂ ತಲಾ ಒಂದು ಅಂಕ ನೀಡಲಾಗಿದ್ದು, ಆರ್‌ಸಿಬಿ 12 ಪಂದ್ಯಗಳಿಂದ 17 ಅಂಕಗಳೊಂದಿಗೆ ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿದ್ದು, 13 ಪಂದ್ಯಗಳಿಂದ 12 ಅಂಕಗಳೊಂದಿಗೆ ಕೆಕೆಆರ್ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.
ಆರ್‌ಸಿಬಿ ಈಗ ಮೇ 23 ರಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ಆತಿಥ್ಯ ವಹಿಸಲಿದ್ದು, ನಂತರ ಮೇ 27 ರಂದು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲು ಲಕ್ನೋಗೆ ಪ್ರಯಾಣ ಬೆಳೆಸಲಿದೆ.