ಬಾಯ್‌ಫ್ರೆಂಡ್‌ಗೆ ಖಾಸಗಿ ಫೋಟೋಗಳನ್ನು ಕಳಿಸಿದ ಯುವತಿ ಪೇಚೆಗೆ ಸಿಲುಕಿದ್ದು, ಪೊಲೀಸರ ಮೊರೆಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿನಿ ತನ್ನ ಪ್ರೇಮಿಗೆ ಕಳಿಸಿದ್ದು, ಅದೇ ಫೋಟೋಗಳನ್ನಿಟ್ಟುಕೊಂಡು ಅಪರಿಚಿತ ನಂಬರ್ನಿಂದ ಬ್ಲಾಕ್ಮೇಲ್ ಕರೆ ಬಂದಿದೆ. ಈ ಸಂಬಂಧ ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ.
1 ಲಕ್ಷ ರೂ. ನೀಡಿದರೂ ಹೆಚ್ಚು ಹಣಕ್ಕೆ ಬೇಡಿಕೆ
ಯುವತಿ ಕೆಲ ಸಮಯದ ಹಿಂದೆ ತನ್ನ ಬಾಯ್‌ಫ್ರೆಂಡ್‌ಗೆ ಖಾಸಗಿ ಫೋಟೋಗಳನ್ನು ಕಳಿಸಿದ್ದಳು. ನಂತರ ಅಪರಿಚಿತ ಸಂಖ್ಯೆಯಿಂದ ಅದೇ ಖಾಸಗಿ ಫೋಟೋಗಳನ್ನು ಯುವತಿಯ ಮೊಬೈಲ್‌ಗೆ ಕಳುಹಿಸಿ, ಹಣ ನೀಡದಿದ್ದರೆ ಫೋಟೋಗಳನ್ನು ಸಾರ್ವಜನಿಕವಾಗಿ ಹರಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ.
ಈ ವಿಚಾರವನ್ನು ಯುವತಿ ತನ್ನ ಸ್ನೇಹಿತನೊಂದಿಗೆ ಚರ್ಚಿಸಿದ್ದು, ಬ್ಲ್ಯಾಕ್‌ಮೇಲರ್‌ನ ಒತ್ತಡಕ್ಕೆ ಒಳಗಾಗಿ ಸ್ನೇಹಿತನ ಮೂಲಕ ಸುಮಾರು 1 ಲಕ್ಷ ರೂಪಾಯಿ ಹಣವನ್ನು ಪಾವತಿಸಿದ್ದಳು. ಆದರೂ ಅಪರಿಚಿತ ಸಂಖ್ಯೆಯಿಂದ ಮತ್ತೆ ಮತ್ತೆ ಹೆಚ್ಚಿನ ಹಣಕ್ಕೆ ಬೇಡಿಕೆ ಬರುತ್ತಲೇ ಇತ್ತು. ಈ ವೇಳೆ ಫೋಟೋಗಳು ಬ್ಲ್ಯಾಕ್‌ಮೇಲರ್‌ಗೆ ಹೇಗೆ ಸಿಕ್ಕವು ಎಂಬ ಅನುಮಾನ ಮೂಡಿತ್ತು. ಮೊದಲಿಗೆ ತನ್ನ ಪ್ರಿಯಕರನೇ ಈ ಕೆಲಸ ಮಾಡಿರಬಹುದೆಂಬ ಅನುಮಾನವೂ ಯುವತಿಯ ತಲೆ ಹೊಕ್ಕಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲಿ ಈ ದುಷ್ಕೃತ್ಯದಲ್ಲಿ ಆಕೆಯ ಬಾಯ್‌ಫ್ರೆಂಡ್ ಪಾತ್ರ ಇಲ್ಲ ಎಂಬುದು ಪೊಲೀಸರಿಂದ ತಿಳಿದುಬಂದಿದೆ.
ಸಧ್ಯಕ್ಕೆ ಪ್ರಕರಣ ದಾಖಲಿಸಿಕೊಂಡಿರುವ ಕೇಂದ್ರ ವಿಭಾಗ ಸೈಬರ್ ಕ್ರೈಂ ಪೊಲೀಸರು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ತನಿಖೆ ಮುಂದುವರಿಸಿದ್ದಾರೆ. ಸಾರ್ವಜನಿಕರು ಈ ರೀತಿ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವ ವೇಳೆ ಎಚ್ಚರ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಪ್ರಿಯಕರನಿಗೆ ಬೆತ್ತಲೆ ಫೋಟೋ ಕಳಿಸಿದ 19 ರ ಯುವತಿಗೆ ಬ್ಲಾಕ್ ಮೇಲರ್ ಕಾಟ – ಹಣಕ್ಕೆ ಬೇಡಿಕೆ
WhatsApp Group
Join Now