ಹಿರಿಯೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 09 ಜನರ ಜೀವ ಬಲಿ ಪಡೆದ ಭೀಕರ ಬಸ್ ಅಪಘಾತ ಸ್ಥಳಕ್ಕೆ ದಾವಣಗೆರೆ ಪೂರ್ವ ವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಅವರು ಇಂದು ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಖಾಸಗಿ ಬಸ್ ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಘಟನೆ ವೇಳೆ ಲಾರಿಯಿಂದ ಗುದ್ದಿಸಿಕೊಂಡ ಖಾಸಗಿ ಬಸ್ ಹೊತ್ತಿ ಉರಿಯುವ ಮುನ್ನ ಅದೇ ದಾರಿಯಲ್ಲಿ ಪ್ರವಾಸಕ್ಕೆ ಹೊರಟಿದ್ದ ಶಾಲಾ ಮಕ್ಕಳಿದ್ದ ಬಸ್ ಗೂ ಡಿಕ್ಕಿ ಹೊಡೆದಿದೆ. ಆದರೆ ಅದೃಷ್ಟವಶಾತ್ ಮಕ್ಕಳಿಗೆ ಏನು ಆಗಿಲ್ಲ. ಶಾಲಾ ಮಕ್ಕಳ ಬಸ್ ಚಾಲಕನೇ ಘಟನೆಯ ಪ್ರತ್ಯಕ್ಷದರ್ಶಿ ಎಂದು ಅವರು ತಿಳಿಸಿದರು.
ಇಂದು (ಡಿ.24) ಬೆಳಗಿನ ಜಾವ ಸುಮಾರು 2 ಗಂಟೆಗೆ ಹೊತ್ತಿಗೆ ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಡುತ್ತಿದ್ದ ಸಿಬರ್ಡ್ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಹೈವೇಯಲ್ಲಿ ಎದುರಗಡೆಯಿಂದ ಬರುತ್ತಿದ್ದ ಕಂಟೇನರ್ ಲಾರಿಯು ಡಿವೈಡರ್ ಹತ್ತಿ ಈ ಬಸ್‌ಗೆ ಡಿಕ್ಕಿ ಹೊಡೆದಿದೆ. ವೇಗವಾಗಿ ಬಂದ ಕಂಟೇನರ್ ರಭಸವಾಗಿ ಬಸ್ ನ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತತ್‌ಕ್ಷಣಕ್ಕೆ ಬಸ್ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಜ್ವಾಲೆ ಬಸ್ ತುಂಬಾ ಆವರಿಸಿದ ಪರಿಣಾಮ 08 ಮಂದಿ ಪ್ರಯಾಣಿಕರು ಸುಟ್ಟು ಹೋಗಿದ್ದು, ಹೊರ ಬರಲಾಗದೇ ಮೃತಪಟ್ಟಿದ್ದಾರೆ ಎಂದು ವಿವರಿಸಿದರು.
ಕಂಟೇನರ್ ಚಾಲಕ ಸೇರಿ 09 ಸಾವು
ಬೆಂಕಿ ಕಾಣಿಸುತ್ತಿದ್ದಂತೆ ಬಸ್‌ನಲ್ಲಿದ್ದ ಕೆಲವರು ಪಾರಾಗಿದ್ದಾರೆ. ಎಂಟು ಜನ ಬಸ್ ಒಳಗೆ ಸಿಕ್ಕಿ ಹಾಕಿಕೊಂಡು ಮೃತಪಟ್ಟಿದ್ದಾರೆ. ತೀವ್ರ ಬೆಂಕಿ ಆವರಿಸಿದ್ದರಿಂದ ಬಸ್‌ಗೆ ಗುದ್ದಿದ ಕಂಟೆನರ್ ಚಾಲಕ ಸಹ ಬೆಂಕಿಯಲ್ಲಿ ಬೆಂದು ಮೃತಪಟ್ಟಿದ್ದಾನೆ. ಒಬ್ಬ ಚಾಲಕ, ಎಂಟು ಮಂದಿ ಬಸ್ ಪ್ರಯಾಣಿಕರು ಸೇರಿ ಈವರೆಗೆ ಒಟ್ಟು ಒಂಬತ್ತು ಮಂದಿ ಮೃತಪಟ್ಟಿದ್ದಾಗಿ ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.
ಉಳಿದಂತೆ ಗಾಯಾಳುಗಳ ಪೈಕಿ 12 ಹಿರಿಯೂರಿಗೆ, ಒಂಬತ್ತು ಜನ ಶಿರಾ ಹಾಗೂ ಮೂರು ಜನ ಗಾಯಾಳುಗಳನ್ನು ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ತಗುಲಿದ ಮೂವರು ಗಾಯಾಳುಗಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ತೀವ್ರವಾಗಿ ಬೆಂಕಿ ತಗುಲಿ ಗಾಯಗೊಂಡವರನ್ನು ಹೊರತುಪಡಿಸಿದರೆ ಅದೃಷ್ಟವಶಾತ್ ಉಳಿದವರ ಜೀವಕ್ಕೆ ಅಪಾಯ ಇಲ್ಲ. ಒಟ್ಟು 32 ಜನ ಪ್ರಯಾಣಿಸುತ್ತಿದ್ದರು. ಅದರಲ್ಲಿ ಎಂಟು ಜನ ಮೃತಪಟ್ಟಿರುವ ಮಾಹಿತಿ ಸಿಕ್ಕಿದೆ. ಇನ್ನಷ್ಟು ಮಾಹಿತಿ ತಿಳಿಯಬೇಕಿದೆ ಎಂದರು.
ಡಿಎನ್‌ಎ ಪರೀಕ್ಷೆಗೆ ತಯಾರಿ: ಮೃತದೇಹ ಹಸ್ತಾಂತರ ಶೀಘ್ರ
ಬಸ್ ಒಳಗೆ ಸಿಲುಕಿದ ಜನರಲ್ಲಿ ಎಂಟು ಜನರಿದ್ದಾರೆ ಎನ್ನಲಾಗಿದೆ. ಒಂದು ಮಗುವಿನ ಶವ ಪತ್ತೆ ಆಗಿದೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬೇಕಿದೆ. ಮೃತರ ಶವ ಸಂಗ್ರಹಿಸಿ ತಜ್ಞರಿಂದ ಡಿಎನ್‌ಎ ಪರಿಶೀಲಿಸಲಾಗುವುದು. ಡಿಎನ್‌ಎಗೆ ಸಾಕ್ಷ್ಯ ಸಂಗ್ರಹಿಸಿ ತನಿಖೆ ನಡೆಸಲಾಗುವುದು. ಮೃತರು ಯಾರು ಎಂಬುದು ಪತ್ತೆ ಮಾಡುತ್ತೇವೆ. ಮರಣೋತ್ತರ ಪರೀಕ್ಷೆ ಬಳಿಕ ಪಾರ್ಥಿವ್ ಶರೀರಗಳನ್ನು ಅವರ ಕಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಅದೃಷ್ಟವಶಾತ್ ಉಳಿಯಿತು 42 ಶಾಲಾ ಮಕ್ಕಳ ಜೀವ
ಅದೃಷ್ಟದ ಸಂಗತಿ ಎಂದರೆ ಕಂಟೇನರ್ ಲಾರಿಯು ಬಸ್‌ಗೆ ಡಿಕ್ಕಿ ಹೊಡೆದಾಗಿ ಅದೇ ಬಸ್‌ಗೆ ಸಮಾನಾಂತರವಾಗಿ 42 ಶಾಲಾ ಮಕ್ಕಳಿದ್ದ ಬಸ್ ಬೆಂಗಳೂರಿನ ಟಿ. ದಾಸರಹಳ್ಳಿಯಿಂದ ದಾಂಡೇಲಿಗೆ ಪ್ರವಾಸಕ್ಕೆ ಹೊರಟಿತ್ತು. ಲಾರಿ ಗುದ್ದಿದ ರಭಸಕ್ಕೆ ಸುಟ್ಟ ಬಸ್ ಈ ಮಕ್ಕಳಿದ್ದ ಬಸ್‌ಗೂ ಡಿಕ್ಕಿ ಹೊಡೆದಿದೆ. ಆದರೆ ಚರಂಡಿ, ರಸ್ತೆ ವಿಭಜಕ ದಾಟಿ ಹೋಗಿ ನಿಂತು ಕೊಂಡ ಪರಿಣಾಮ, ಶಾಲಾ ಮಕ್ಕಳಿಗೆ ಯಾವ ತೊಂದರೆ ಆಗಿಲ್ಲ ಎಂದು ತಿಳಿಸಿದರು.
ಬೇರೆ ಬಸ್‌ನಲ್ಲಿ ಮಕ್ಕಳನ್ನು ಕರೆದುಕೊಂಡು ಅವರು ಪ್ರವಾಸ ಮುಂದುವರಿಸಿದರು. ಆ ಶಾಲಾ ಬಸ್ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ ಚಾಲಕನೇ ಈ ಭೀಕರ ರಸ್ತೆ ಅಪಘಾತಕ್ಕೆ ಸಾಕ್ಷಿಯಾಗಿದ್ದಾರೆ. ಎಲ್ಲವನ್ನು ಅವರು ಪ್ರತ್ಯೆಕ್ಷವಾಗಿ ಕಂಡಿದ್ದಾರೆ. ಸದ್ಯ ಈವರೆಗಿನ ಮಾಹಿತಿ ಇಷ್ಟು, ತನಿಖೆ ಬಳಿಕ ಇನ್ನಷ್ಟು ಮಾಹಿತಿ ಸಿಗಲಿದೆ ಎಂದು ರವಿಕಾಂತೇಗೌಡ ಅವರು ಹೇಳಿದರು.
ಚಿತ್ರದುರ್ಗ ಬಸ್ ಅಪಘಾತ ವಿವರಿಸಿದ ಐಜಿಪಿ ಬಿ.ಆರ್.ರವಿಕಾಂತೇಗೌಡ : 42 ಮಕ್ಕಳಿದ್ದ ಬಸ್ ಜಸ್ಟ್ ಮಿಸ್!
WhatsApp Group
Join Now